ಅರ್ಚನಾ ಕಾಮತ್ಗೆ ಎರಡು ಕಂಚು

0
161

ಬೆಂಗಳೂರು: ಕರ್ನಾಟಕದ ಪ್ರತಿಭಾನ್ವಿತ ಆಟಗಾರ್ತಿ ಅರ್ಚನಾ ಕಾಮತ್ ಅವರು ನವದೆಹಲಿಯಲ್ಲಿ ನಡೆದ 47ನೇ ಅಖಿಲ ಭಾರತ ಅಂತರ ಸಂಸ್ಥೆ ಟೇಬಲ್ ಟೆನಿಸ್ ಚಾಂಪಿಯನ್ಷಿಪ್ನಲ್ಲಿ ಎರಡು ಕಂಚಿನ ಪದಕಗಳನ್ನು ಗಳಿಸಿದ್ದಾರೆ.

ಮಹಿಳೆಯರ ಡಬಲ್ಸ್ ಮತ್ತು ಮಿಶ್ರ ಡಬಲ್ಸ್ ವಿಭಾಗಗಳಲ್ಲಿ ಬೆಂಗಳೂರಿನ ಅರ್ಚನಾ ಈ ಸಾಧನೆ ಮಾಡಿದ್ದಾರೆ. ಚಾಂಪಿಯನ್ಷಿಪ್ನಲ್ಲಿ ಪಿಎಸ್ಪಿಬಿ ತಂಡವನ್ನು ‍ಪ್ರತಿನಿಧಿಸಿದ್ದ ಅರ್ಚನಾ, ಡಬಲ್ಸ್ ವಿಭಾಗದಲ್ಲಿ ರಿತಿ ಶಂಕರ್ ಜೊತೆಗೂಡಿ ಆಡಿದ್ದರು.

ಸೆಮಿಫೈನಲ್ನಲ್ಲಿ ಅರ್ಚನಾ ಮತ್ತು ರಿತಿ 0-3ರ ನೇರ ಗೇಮ್ಗಳಿಂದ ಆರ್ಬಿಐನ ಅಗ್ರಶ್ರೇಯಾಂಕದ ಜೋಡಿ ಅಹಿಕಾ ಮುಖರ್ಜಿ ಮತ್ತು ಅಕುಲಾ ಶ್ರೀಜಾ ವಿರುದ್ಧ ಸೋತರು.

ಇದಕ್ಕೂ ಮುನ್ನ ನಡೆದಿದ್ದ ಪ್ರೀ ಕ್ವಾರ್ಟರ್ ಫೈನಲ್ ಹಣಾಹಣಿಯಲ್ಲಿ 3-0ರಿಂದ ಹರಿಯಾಣದ ಸುಹಾನ ಸೈನಿ ಮತ್ತು ರೋಹಿಲ್ಲಾ ಅಂಜಲಿ ಅವರನ್ನು ಮಣಿಸಿದ್ದ ಅರ್ಚನಾ ಮತ್ತು ರಿತಿ ಅವರು ಕ್ವಾರ್ಟರ್ ಫೈನಲ್ನಲ್ಲಿ 3-0ಯಲ್ಲಿ ಆರ್‌ಎಸ್ಪಿಬಿಯ ಅನಿಂದಿತಾ ಚಕ್ರವರ್ತಿ ಮತ್ತು ಶ್ರೇಯಾ ಘೋಷ್ ವಿರುದ್ಧ ಗೆದ್ದಿದ್ದರು.

ಮಿಶ್ರ ಡಬಲ್ಸ್ನಲ್ಲೂ ಕಂಚು: ಮಿಶ್ರ ಡಬಲ್ಸ್ ವಿಭಾಗದಲ್ಲಿ ಸೌರವ್ ಸಹಾ ಜೊತೆ ಆಡಿದ ಅರ್ಚನಾ ಕಂಚಿಗೆ ತೃಪ್ತಿಪಟ್ಟರು. ನಾಲ್ಕರ ಘಟ್ಟದ ಹೋರಾಟದಲ್ಲಿ ಪಿಎಸ್ಪಿಬಿಯ ಅರ್ಚನಾ ಮತ್ತು ಸೌರವ್ 1-3ರಲ್ಲಿ ಆರ್ಬಿಐನ ಅಗ್ರಶ್ರೇಯಾಂಕಿದ ಆಟಗಾರರಾದ ರಾಜ್ ಮಂಡಲ್ ಮತ್ತು ಅಕುಲಾ ಶ್ರೀಜಾ ವಿರುದ್ಧ ಪರಾಭವಗೊಂಡರು.

ಪ್ರೀ ಕ್ವಾರ್ಟರ್ನಲ್ಲಿ 3-0ರಲ್ಲಿ ಎಎಐನ ಅಭಿನವ್ ಬೆಲಾವಲ್ ಮತ್ತು ಪ್ರಿಯಾಂಕ ಪಾರೀಖ್ ಅವರನ್ನು ಸೋಲಿಸಿದ್ದ ಅರ್ಚನಾ ಜೋಡಿ, ಕ್ವಾರ್ಟರ್ ಫೈನಲ್ನಲ್ಲೂ ಮೋಡಿ ಮಾಡಿತು. ಎಂಟರ ಘಟ್ಟದ ಹಣಾಹಣಿಯಲ್ಲಿ ಇವರು 3-0ರಲ್ಲಿ ಆರ್ಬಿಐನ ಸೌವಿಕ್ ರಾಯ್ ಮತ್ತು ಅಮೃತಾ ಪುಷ್ಪಕ್ ಅವರನ್ನು ಸೋಲಿಸಿದ್ದರು.

ಕ್ವಾರ್ಟರ್ ಫೈನಲ್ನಲ್ಲಿ ನಿರಾಸೆ: ಮಹಿಳೆಯರ ಸಿಂಗಲ್ಸ್ ವಿಭಾಗದಲ್ಲಿ ಪಿಎಸ್ಪಿಬಿಯ ಸವಾಲು ಎತ್ತಿ ಹಿಡಿದಿದ್ದ ಅರ್ಚನಾ ಅವರು ಕ್ವಾರ್ಟರ್ ಫೈನಲ್ನಲ್ಲಿ ನಿರಾಸೆ ಕಂಡರು.

ಎಂಟರ ಘಟ್ಟದ ಪೈಪೋಟಿಯಲ್ಲಿ ಅವರು 3-11, 7-11, 14-16, 11-9, 11-9, 5-11ರಲ್ಲಿ ಅಗ್ರಶ್ರೇಯಾಂಕಿತ ಆಟಗಾರ್ತಿ ಹಾಗೂ ರಾಷ್ಟ್ರೀಯ ಚಾಂಪಿಯನ್ ಮಧುರಿಕಾ ಪಾಟ್ಕರ್ ವಿರುದ್ಧ ನಿರಾಸೆ ಕಂಡರು.

ಇದಕ್ಕೂ ಮೊದಲು ನಡೆದಿದ್ದ ಪ್ರೀ ಕ್ವಾರ್ಟರ್ ಫೈನಲ್ನಲ್ಲಿ ಕರ್ನಾಟಕದ ಆಟಗಾರ್ತಿ 5-11, 11-3, 13-15, 14-12, 11-8, 13-11ರಲ್ಲಿ ಪಿಎಸ್ಪಿಬಿಯ ರೀತ್ ರಿಷ್ಯಾ ಅವರನ್ನು ಸೋಲಿಸಿದ್ದರು.

ಟೂರ್ನಿಯಲ್ಲಿ ಅರ್ಚನಾ ಒಟ್ಟು ನಾಲ್ಕು ಪದಕಗಳನ್ನು ತಮ್ಮದಾಗಿಸಿಕೊಂಡಿದ್ದಾರೆ. ಇದಕ್ಕೂ ಮುನ್ನ ಮಹಿಳೆಯರ ತಂಡ ಚಾಂಪಿಯನ್ಷಿಪ್ನಲ್ಲಿ ಚಿನ್ನ ಜಯಿಸಿದ್ದ ಅವರು ಯೂತ್ ಬಾಲಕಿಯರ ತಂಡ ಚಾಂಪಿಯನ್ಷಿಪ್ನಲ್ಲಿ ಬೆಳ್ಳಿಯ ಸಾಧನೆ ಮಾಡಿದ್ದರು.

LEAVE A REPLY

Please enter your comment!
Please enter your name here