ರಕ್ಷಾ ಬಂಧನ’ ಅಣ್ಣ-ತಂಗಿಯರ ಬಾಂಧವ್ಯ ಗಟ್ಟಿಗೊಳಿಸುವ ಹಬ್ಬ

0
165

ಭಾರತೀಯರು ಸಂಬಂಧಗಳಿಗೆ ಕೊಡುವಂತಹ ಬೆಲೆ ಬೇರೆ ಯಾರೂ ಕೊಡುವುದಿಲ್ಲವೆಂದರೆ ತಪ್ಪಾಗಲಿಕ್ಕಿಲ್ಲ. ಭಾರತದಲ್ಲಿ ಪ್ರತಿಯೊಂದು ಸಂಬಂಧಕ್ಕೂ ತನ್ನದೇ ಆದ ಮಹತ್ವವಿರುವುದು. ಅದರಲ್ಲೂ ಅಣ್ಣ-ತಂಗಿ ಸಂಬಂಧದ ಬಗ್ಗೆ ವರ್ಣಿಸಲು ಪದಗಳೇ ಸಾಕಾಗದು. ಅನಾದಿ ಕಾಲದಿಂದಲೂ ಅಣ್ಣ-ತಂಗಿ ಸಂಬಂಧಕ್ಕೆ ಅದರದ್ದೇ ಆದ ಮಹತ್ವವಿದೆ. ವಿದೇಶದಲ್ಲಿ ಪ್ರತಿಯೊಂದು ಸಂಬಂಧಕ್ಕೂ ಅದರದ್ದೇ ಆಗಿರುವಂತಹ ದಿನಗಳನ್ನು ಆಚರಿಸಲಾಗುತ್ತದೆ. ಇದು ಇಂದು ಭಾರತದಲ್ಲೂ ಕಾಣಿಸಿಕೊಳ್ಳುತ್ತಾ ಇದೆ.

ಆದರೆ ಭಾರತೀಯರು ಹೆಚ್ಚು ಖುಷಿಯಿಂದ ಆಚರಿಸುವಂತಹ ಹಬ್ಬವೆಂದರೆ ಅದು ರಕ್ಷಾಬಂಧನ. ಇದು ಅಣ್ಣ ಮತ್ತು ತಂಗಿಯ ಪ್ರೀತಿಯನ್ನು ತೋರಿಸುತ್ತದೆ. ಭಾರತದಂತೆ ನೇಪಾಳದಲ್ಲೂ ಈ ಹಬ್ಬ ಆಚರಿಸಲಾಗುವುದು. ಶ್ರಾವಣ ತಿಂಗಳ ಹುಣ್ಣೆಮೆಯಂದು ರಕ್ಷಾಬಂಧನವನ್ನು ಆಚರಿಸಲಾಗುವುದು. ರಕ್ಷಾ ಬಂಧನವನ್ನು ಪ್ರತಿಯೊಬ್ಬರು ಆಚರಿಸುತ್ತಾರೆ. ಆದರೆ ಅದರ ಅರ್ಥವೇನು ಮತ್ತು ಮಹತ್ವವೇನು ಎಂದು ಬೋಲ್ಡ್ ಸ್ಕೈ ನಿಮಗೆ ಹೇಳಿಕೊಡಲಿದೆ….

ರಕ್ಷಾಬಂಧನ ಮತ್ತು ಅದರ ಅರ್ಥ

ರಕ್ಷಾಬಂಧನದಲ್ಲಿ ಎರಡು ಪದಗಳಿವೆ. ಅದೇ ರಕ್ಷಾ ಮತ್ತು ಬಂಧನ. ರಕ್ಷಾ ಎಂದರೆ ರಕ್ಷಣೆ ಮತ್ತು ಬಂಧನ ಎಂದರೆ ಬಂಧವೆಂದರ್ಥ. ಸೋದರ ಮತ್ತು ಸೋದರಿ ತಮ್ಮೊಳಗೆ ಹಂಚಿಕೊಳ್ಳುವ ಯಾವತ್ತೂ ಕೊನೆಗೊಳ್ಳದ ಪ್ರೀತಿಯನ್ನು ರಕ್ಷಾಬಂಧನವೆನ್ನಬಹುದು. ಕೇವಲ ಸೋದರ-ಸೋದರಿ ಮಾತ್ರ ಈ ಹಬ್ಬವನ್ನು ಆಚರಿಸುವುದಿಲ್ಲ. ಸೋದರ ಸಂಬಂಧಿಗಳು ಕೂಡ ಇದನ್ನು ಆಚರಿಸಿಕೊಳ್ಳುವರು. ಆದರೆ ಇಂದಿನ ದಿನಗಳಲ್ಲಿ ಪ್ರತಿಯೊಂದು ಆಧುನೀಕರಣಗೊಂಡಿದೆ. ಅದೇ ರೀತಿ ರಕ್ಷಾಬಂಧನವು ಆಧುನೀಕರಣಗೊಂದಿದೆ. ಇಂದಿನ ದಿನಗಳಲ್ಲಿ ಚಿಕ್ಕಮ್ಮ, ಅತ್ತಿಗೆ ಮತ್ತು ಇತರರು ರಕ್ಷಾ ಬಂಧನ ಕಟ್ಟುತ್ತಾರೆ.

ರಕ್ಷಾಬಂಧನ ಯಾಕೆ ಆಚರಿಸಬೇಕು?

ಸೋದರ ಮತ್ತು ಸೋದರಿಯ ನಡುವಿನ ಭಾಂದವ್ಯ ಬಲಗೊಳ್ಳಲಿ ಎನ್ನುವ ಕಾರಣಕ್ಕಾಗಿ ಮಾತ್ರ ಈ ಹಬ್ಬವನ್ನು ಆಚರಿಸಲಾಗುತ್ತಾ ಇಲ್ಲ. ಇದನ್ನು ಹಲವಾರು ರೀತಿಯಿಂದ ಆನಂದಿಸಲಾಗುತ್ತದೆ. ಕೆಲವೊಂದು ಪೌರಾಣಿಕ ಕಾರಣಗಳು ಕೂಡ ರಕ್ಷಾಬಂಧನದ ಹಿಂದಿದೆ. ಅದು ಯಾವುದೆಂದು ತಿಳಿಯಲು ಮುಂದಕ್ಕೆ ಓದಿಕೊಳ್ಳಿ.

ರಕ್ಷಾಬಂಧನ ಆಚರಿಸುವ ಪೌರಾಣಿಕ ಕಾರಣಗಳು

ವ್ರತ್ರ ಅಸುರನಿಂದ ಸೋಲಿಸಲ್ಪಟ್ಟಂತಹ ಇಂದ್ರನಿಗೆ ತನ್ನ ಶತ್ರುಗಳಿಂದ ರಕ್ಷಣೆ ಪಡೆಯಬೇಕಾದರೆ ಕೈಗೆ ರಾಖಿ ಕಟ್ಟಿಕೊಳ್ಳಬೇಕು ಎಂದು ಗುರು ಬ್ರಹಸ್ಪತಿ ಅವರು ಹೇಳಿದರು. ಬ್ರಹಸ್ಪತಿ ಅವರ ಮಾತಿನಂತೆ ಇಂದ್ರನ ಒಡನಾಡಿ ಸಚಿ ದೇವಿಯು ಇಂದ್ರನಿಗೆ ರಾಖಿ ಕಟ್ಟಿದಳು ಎಂದು ಭವಿಷ್ಯ ಪುರಾಣದಲ್ಲಿದೆ.

ವರುಣ ದೇವನನ್ನು ಒಲೈಸಿಕೊಳ್ಳುವ ಸಲುವಾಗಿ ರಕ್ಷಾಬಂಧನವನ್ನು ಆಚರಿಸಲಾಗುತ್ತದೆ ಎಂದು ಇನ್ನೊಂದು ಪುರಾಣವು ಹೇಳಿದೆ. ರಕ್ಷಾಬಂಧನ ಹಬ್ಬದಂದು ಹಬ್ಬದ ಸ್ನಾನ, ತೆಂಗಿನ ಕಾಯಿ ಉಡುಗೊರೆ ನೀಡುವುದು ಮತ್ತು ಸಮುದ್ರ ದೇವನಿಗೆ ಪೂಜೆ ಮಾಡುವುದು ಈ ಹಬ್ಬದ ದಿನ ನಡೆಯುತ್ತದೆ. ರಕ್ಷಾಬಂಧನ ಹಬ್ಬವನ್ನು ಮೀನುಗಾರ ಸಮುದಾಯದವರು ತುಂಬಾ ವಿಜೃಂಭಣೆಯಿಂದ ಆಚರಿಸುವರು. ಈ ವೇಳೆ ವರುಣ ದೇವನಿಗೆ ರಾಖಿ ಮತ್ತು ತೆಂಗಿನಕಾಯಿಯನ್ನು ಸಮರ್ಪಿಸುವರು. ಪುರಾಣಗಳ ಪ್ರಕಾರ ಈ ದಿನವನ್ನು ನಾರಿಯಲ್ ಪೂರ್ಣಿಮಾ’ ಎಂದು ಕರೆಯಲಾಗುತ್ತದೆ.

ರಕ್ಷಣೆಯನ್ನು ನೀಡುವ ಬಂಧನ- ಅದುವೇ ‘ರಕ್ಷಾ ಬಂಧನ’

ಬಲಿ ಚಕ್ರವರ್ತಿಯು ಸ್ವರ್ಗದ ಮೇಲೆ ದಂಡೆತ್ತಿ ಬಂದಾಗ ತನ್ನ ಪತಿ ವಿಷ್ಣುವನ್ನು ಉಳಿಸಿಕೊಳ್ಳಲು ಲಕ್ಷ್ಮೀ ದೇವಿಯು ಬಲಿಗೆ ರಾಖಿ ಕಟ್ಟಿದಳು ಎನ್ನುವುದು ಇನ್ನೊಂದು ಪುರಾಣದಲ್ಲಿದೆ. ಇದರ ಬಳಿಕ ಲಕ್ಷ್ಮೀ ದೇವಿಯನ್ನು ಸೋದರಿಯನ್ನಾಗಿ ಮಾಡಿಕೊಂಡ ಬಲಿಯು ವಿಷ್ಣುವನ್ನು ಕೊಲ್ಲದೆ ಬಿಟ್ಟ ಎಂದು ಪುರಾಣಗಳಲ್ಲಿ ಇದೆ.

ರಕ್ಷಾಬಂಧನ ಆಚರಿಸಲು ಐತಿಹಾಸಿಕ ಕಾರಣಗಳು

ಪಂಜಾಬ್ ನ ರಾಜ ಪುರುಷೋತ್ತಮ ಎಂಬಾತ ಅಲೆಕ್ಸಾಂಡರ್ ನನ್ನು ಸೋಲಿಸುವ ಸನಿಹಕ್ಕೆ ಬಂದಿದ್ದ. ಆದರೆ ಅಲೆಕ್ಸಾಂಡರ್ ನ ಪತ್ನಿ ಯು ಪುರುಷೋತ್ತಮ ರಾಜನಿಗೆ ರಾಖಿ ಕಟ್ಟಿ ತನ್ನ ಪತಿಯ ಪ್ರಾಣವನ್ನು ಉಳಿಸಿಕೊಂಡಳು. ಹುಮಾಯುನನ ಆಡಳಿತದ ಸಂದರ್ಭದಲ್ಲಿ ಚಿತ್ತೂರ್ ನ ರಾಣಿ ಕರ್ಣಾವತಿಯು ತನ್ನ ರಾಜ್ಯವನ್ನು ಬಹಾದ್ದೂರ್ ಷಾ ನ ದಾಳಿಯಿಂದ ಕಾಪಾಡಲು ಹುಮಾಯುನನಿಗೆ ರಾಖಿ ಕಟ್ಟಿದಳು. ಇದರಿಂದ ಆಕೆಯ ರಾಜ್ಯವನ್ನು ಹುಮಾಯುನ ರಕ್ಷಿಸಿದ.

ಹುಮಾಯುನ ಹಿಂದೂ ಅಲ್ಲದಿದ್ದರೂ ಆತ ಆಕೆಯನ್ನು ಸೋದರಿಯಾಗಿ ಸ್ವೀಕರಿಸಿ ನೆರವಾದ. ಭಾರತದಲ್ಲಿ ರಕ್ಷಾಬಂಧನಕ್ಕೆ ವಿವಿಧ ಧರ್ಮದಲ್ಲಿ ಅದರದ್ದೇ ಆಗಿರುವಂತಹ ಆಚರಣೆಗಳು ಇವೆ. ಜೈನರು ತಮ್ಮ ಗುರುವಿನಿಂದ ದಾರವನ್ನು ಪಡೆದುಕೊಂಡು ಕಟ್ಟಿಕೊಳ್ಳುವರು. ಸಿಕ್ಖರು ರಕ್ಷಾಬಂಧನವನ್ನು ರಾಖರಿ ಅಥವಾ ರಾಖದಿ ಎಂದು ಆಚರಿಸುತ್ತಾರೆ.

ರಕ್ಷಾ ಬಂಧನವನ್ನು ಭಾರತ ಸಹಿತ ಕೆಲವೊಂದು ದೇಶಗಳಲ್ಲಿ ಆಚರಿಸಲ್ಪಡುವುದಾಗಿ ನಾವು ತಿಳಿದುಕೊಂಡಿದ್ದೇವೆ. ಸೋದರನಿಗೆ ರಾಖಿಯನ್ನು ಕಟ್ಟುವ ಸೋದರಿಯು ಆತನಿಗೆ ಆರೋಗ್ಯ, ಸಮೃದ್ಧಿ ಮತ್ತು ಸುಖ ಸಿಗಲೆಂದು ಪ್ರಾರ್ಥಿಸುತ್ತಾಳೆ. ಈ ವೇಳೆ ಸೋದರಿಯನ್ನು ಖುಷಿ ಪಡಿಸಲು ಸೋದರನು ಉಡುಗೊರೆ ಹಾಗೂ ಆಶೀರ್ವಾದ ನೀಡುತ್ತಾನೆ ಮತ್ತು ಯಾವುದೇ ಸಮಯದಲ್ಲೂ ನಿನ್ನನ್ನು ಕೆಟ್ಟ ಜನರು ಮತ್ತು ಪರಿಸ್ಥಿತಿಯಿಂದ ರಕ್ಷಿಸುವುದಾಗಿ ಪ್ರಮಾಣ ಮಾಡುತ್ತಾನೆ. ಸೋದರಿಯನ್ನು ರಕ್ಷಿಸುವುದು ಮತ್ತು ಕೆಟ್ಟ ಸಮಯದಲ್ಲೂ ಆಕೆಯನ್ನು ಕಾಪಾಡುವುದು ಸೋದರನ ಕರ್ತವ್ಯವಾಗಿದೆ.

source: boldsky.com

LEAVE A REPLY

Please enter your comment!
Please enter your name here