ಶ್ರೀಶಾಂತ್ ಮೇಲಿನ ಆಜೀವ ನಿಷೇಧ ತೆರವು

0
158

ಕೊಚ್ಚಿ: ಕ್ರಿಕೆಟಿಗ ಎಸ್.ಶ್ರೀಶಾಂತ್ ಮೇಲೆ ಭಾರತ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ) ಹೇರಿದ್ದ ಆಜೀವ ನಿಷೇಧ ಶಿಕ್ಷೆಯನ್ನು ಸೋಮವಾರ ಕೇರಳ ಹೈಕೋರ್ಟ್ ರದ್ದು ಮಾಡಿದೆ.

2013ರ ಇಂಡಿಯನ್ ‍ಪ್ರೀಮಿಯರ್ ಲೀಗ್ (ಐಪಿಎಲ್) ಸ್ಪಾಟ್ ಫಿಕ್ಸಿಂಗ್ ಹಗರಣದಲ್ಲಿ ಶ್ರೀಶಾಂತ್ ಹೆಸರು ಕೇಳಿ ಬಂದಿತ್ತು. ಅವರು ತಪ್ಪಿತಸ್ಥ ಎಂಬುದು ಸಾಬೀತಾಗಿದ್ದರಿಂದ ಬಿಸಿಸಿಐ, ಆಜೀವ ನಿಷೇಧ ವಿಧಿಸಿತ್ತು.

2015ರ ಜುಲೈ ತಿಂಗಳಿನಲ್ಲಿ ಪಟಿಯಾಲ ಹೌಸ್ ನ್ಯಾಯಾಲಯವು ಶ್ರೀಶಾಂತ್, ಅಂಕಿತ್ ಚವ್ಹಾಣ್ ಮತ್ತು ಅಜಿತ್ ಚಾಂಡೀಲ ಸೇರಿದಂತೆ ಸ್ಪಾಟ್ ಫಿಕ್ಸಿಂಗ್ನಲ್ಲಿ ಭಾಗಿಯಾಗಿದ್ದ ಒಟ್ಟು 36 ಮಂದಿಯನ್ನು ದೋಷಮುಕ್ತಗೊಳಿಸಿತ್ತು.

ಆದರೆ ಬಿಸಿಸಿಐ, ನ್ಯಾಯಾಲಯದ ಈ ತೀರ್ಪನ್ನು ಒಪ್ಪಿಕೊಂಡಿರಲಿಲ್ಲ. ಅಷ್ಟೇ ಅಲ್ಲದೆ ವಿದೇಶಿ ಲೀಗ್ಗಳಲ್ಲಿ ಆಡಲು ಶ್ರೀಶಾಂತ್ಗೆ ಒಪ್ಪಿಗೆ ಪತ್ರ ನೀಡಲೂ ನಿರಾಕರಿಸಿತ್ತು.

ಕ್ರಿಕೆಟ್ ಮಂಡಳಿಯ ಈ ನಿರ್ಧಾರವನ್ನು ಪ್ರಶ್ನಿಸಿ ಬಲಗೈ ಮಧ್ಯಮವೇಗಿ ಶ್ರೀಶಾಂತ್, ಕೇರಳ ಹೈಕೋರ್ಟ್ನಲ್ಲಿ ದಾವೆ ಹೂಡಿದ್ದರು. ಇದಕ್ಕೆ ಪ್ರತಿಯಾಗಿ ಬಿಸಿಸಿಐ ಕೂಡ ಅಫಿಡವಿಟ್ ಸಲ್ಲಿಸಿತ್ತು.

ಶ್ರೀಶಾಂತ್ ಅವರ ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಎ.ಮಹಮ್ಮದ್ ಮುಷ್ತಾಕ್ ಅವರು 34 ವರ್ಷದ ಆಟಗಾರನ ಮೇಲಿನ ಎಲ್ಲಾ ಪ್ರಕರಣಗಳನ್ನು ತೆರವುಗೊಳಿಸಿದ್ದಾರೆ. ನ್ಯಾಯಾಲಯದ ಈ ತೀರ್ಪನ್ನು ಕೇರಳ ಕ್ರಿಕೆಟ್ ಸಂಸ್ಥೆ ಸ್ವಾಗತಿಸಿದ್ದು, ಶ್ರೀಶಾಂತ್ಗೆ ಬೆಂಬಲ ಸೂಚಿಸಿದೆ.

‘ಆರಂಭದಿಂದಲೂ ನಾವು ಶ್ರೀಶಾಂತ್ ಬೆನ್ನಿಗೆ ನಿಂತಿದ್ದೇವೆ. ಈಗ ನ್ಯಾಯಾಲಯ ಕೂಡ ಅವರ ಪರವಾಗಿಯೇ ತೀರ್ಪು ನೀಡಿದೆ. ಇದನ್ನು ನಾವು ಸ್ವಾಗತಿಸುತ್ತೇವೆ. ಶ್ರೀಶಾಂತ್, ಶೀಘ್ರವೇ ಕೇರಳ ತಂಡದ ಪರ ಕಣಕ್ಕಿಳಿಯುವ ಭರವಸೆ ಇದೆ’ ಎಂದು ಕೇರಳ ಕ್ರಿಕೆಟ್ ಸಂಸ್ಥೆಯ ಕಾರ್ಯದರ್ಶಿ ಜಯೇಶ್ ಜಾರ್ಜ್ ನುಡಿದಿದ್ದಾರೆ.

‘ಶ್ರೀಶಾಂತ್ ಮೇಲಿನ ನಿಷೇಧ ಹಿಂದಕ್ಕೆ ಪಡೆಯುವಂತೆ ಎರಡು ವರ್ಷಗಳ ಹಿಂದೆಯೇ ನಾವು ಬಿಸಿಸಿಐಗೆ ಮನವಿ ಮಾಡಿದ್ದೆವು. ಆದರೆ ಮಂಡಳಿ ತನ್ನ ನಿರ್ಧಾರದಲ್ಲಿ ಯಾವ ಬದಲಾವಣೆಯನ್ನೂ ಮಾಡುವುದಿಲ್ಲ ಎಂದು ಹೇಳಿತ್ತು. ಈಗ ಕೇರಳ ಹೈಕೋರ್ಟ್, ಶ್ರೀಶಾಂತ್ ಅವರನ್ನು ದೋಷಮುಕ್ತಗೊಳಿಸಿದೆ. ಇದನ್ನು ಬಿಸಿಸಿಐ ಸುಪ್ರೀಂಕೋರ್ಟ್ನಲ್ಲಿ ಪ್ರಶ್ನಿಸಲೂಬಹುದು. ಅವರ ಮುಂದಿನ ನಡೆ ಏನು ಎಂಬುದು ನಮಗೂ ತಿಳಿದಿಲ್ಲ’ ಎಂದಿದ್ದಾರೆ.

ಒಂದು ವೇಳೆ ಬಿಸಿಸಿಐ ನಿಷೇಧ ಹಿಂದಕ್ಕೆ ಪಡೆದರೆ ಈ ಬಾರಿಯ ರಣಜಿ ಟ್ರೋಫಿ ತಂಡದಲ್ಲಿ ಶ್ರೀಶಾಂತ್ಗೆ ಸ್ಥಾನ ನೀಡುತ್ತೀರಾ ಎಂಬ ಪ್ರಶ್ನೆಗೆ ಪ್ರತಿಕ್ರಿಯಿಸಿದ ಜಾರ್ಜ್ ‘ಈ ವಿಚಾರದಲ್ಲಿ ವೈಯಕ್ತಿಕವಾಗಿ ಸದ್ಯ ಏನನ್ನೂ ಹೇಳಲು ಇಚ್ಛಿಸುವುದಿಲ್ಲ. ರಾಜ್ಯ ಸಂಸ್ಥೆಯ ಎಲ್ಲಾ ಪದಾಧಿಕಾರಿಗಳು, ಆಯ್ಕೆ ಸಮಿತಿ ಸದಸ್ಯರುಗಳು ಇದರ ಬಗ್ಗೆ ಚರ್ಚಿಸಿ ಸರಿಯಾದ ನಿರ್ಧಾರ ತೆಗೆದುಕೊಳ್ಳುತ್ತಾರೆ. ಶ್ರೀಶಾಂತ್, ಪ್ರತಿಭಾವಂತ ಆಟಗಾರ. ಅವರ ಸಾಮರ್ಥ್ಯದ ಬಗ್ಗೆ ನಮಗೆ ನಂಬಿಕೆ ಇದೆ. ನಿಷೇಧಕ್ಕೆ ಗುರಿಯಾದ ನಂತರ ಅವರು ನಾಲ್ಕು ವರ್ಷಗಳ ಕಾಲ ಕ್ರಿಕೆಟ್ ಚಟುವಟಿಕೆಗಳಿಂದ ದೂರ ಉಳಿದಿದ್ದರು. ಹೀಗಾಗಿ ಅವರು ಮೊದಲು ಫಿಟ್ನೆಸ್ ಸಾಬೀತುಪಡಿಸಬೇಕಾಗುತ್ತದೆ’ ಎಂದರು.

ಕಾದು ನೋಡುವ ತಂತ್ರ
ಶ್ರೀಶಾಂತ್ ಪ್ರಕರಣಕ್ಕೆ ಸಂಬಂಧಿಸಿದಂತೆ ಬಿಸಿಸಿಐ ಕಾದು ನೋಡುವ ತಂತ್ರ ಅನುಸರಿಸಲು ನಿರ್ಧರಿಸಿದೆ. ಕೇರಳ ಹೈಕೋರ್ಟ್ ತೀರ್ಪಿನ ಕುರಿತು ಮಾತನಾಡಿದ ಬಿಸಿಸಿಐ ಹಂಗಾಮಿ ಅಧ್ಯಕ್ಷ ಸಿ.ಕೆ.ಖನ್ನಾ ‘ಈಗಷ್ಟೇ ನ್ಯಾಯಾಲಯದ ತೀರ್ಪು ಹೊರಬಿದ್ದಿದೆ. ನಮ್ಮ ಕಾನೂನು ಪರಿಣತರ ತಂಡ ಆದೇಶದ ಪ್ರತಿಯನ್ನು ಕೂಲಂಕಷವಾಗಿ ಪರಿಶೀಲಿಸಿ ಶೀಘ್ರವೇ ವರದಿ ನೀಡಲಿದೆ. ಅವರು ವರದಿಯಲ್ಲಿ ಉಲ್ಲೇಖಿಸಿರುವ ಅಂಶಗಳ ಬಗ್ಗೆ ಸಾಮಾನ್ಯ ಸಭೆಯಲ್ಲಿ ಚರ್ಚಿಸುತ್ತೇವೆ. ನಂತರ ಸೂಕ್ತ ತೀರ್ಮಾನ ಕೈಗೊಳ್ಳುತ್ತೇವೆ’ ಎಂದಿದ್ದಾರೆ.

ನಿರಾಳ ಭಾವ ಮೂಡಿದೆ: ಶ್ರೀಶಾಂತ್
‘ಕೇರಳ ಹೈಕೋರ್ಟ್ ಸ್ಪಾಟ್ ಫಿಕ್ಸಿಂಗ್ ಹಗರಣದಿಂದ ನನ್ನನ್ನು ದೋಷಮುಕ್ತಗೊಳಿಸಿದ ಸುದ್ದಿ ತಿಳಿದು ಅತೀವ ಖುಷಿಯಾಗಿದೆ. ದೇವರ ಮೇಲೆ ಇಟ್ಟಿದ್ದ ನಂಬಿಕೆ ಸುಳ್ಳಾಗಲಿಲ್ಲ. ನಾಲ್ಕು ವರ್ಷಗಳ ಸುದೀರ್ಘ ಹೋರಾಟಕ್ಕೆ ಕೊನೆಗೂ ಗೆಲುವು ಸಿಕ್ಕಿದೆ. ಕೇರಳ ಕ್ರಿಕೆಟ್ ತಂಡದಲ್ಲಿ ಸ್ಥಾನ ಗಳಿಸುವುದು ಈಗ ನನ್ನ ಮುಂದಿರುವ ಏಕೈಕ ಗುರಿ. ಅದಕ್ಕಾಗಿ ಈಗಿನಿಂದಲೇ ಸಿದ್ಧತೆ ಕೈಗೊಳ್ಳುತ್ತೇನೆ ಎಂದು ಶ್ರೀಶಾಂತ್ ಖುಷಿ ವ್ಯಕ್ತಪಡಿಸಿದ್ದಾರೆ.

*
ಬಿಸಿಸಿಐನ ಕಾನೂನು ಪರಿಣತರ ತಂಡ ತೀರ್ಪಿನ ಪ್ರತಿಯನ್ನು ಪರಿಶೀಲಿಸಿ ನಮಗೆ ವರದಿ ನೀಡಲಿದೆ. ಬಳಿಕ ಈ ವಿಷಯವನ್ನು ವಾರ್ಷಿಕ ಸಭೆಯಲ್ಲಿ ಚರ್ಚಿಸಿ ಸೂಕ್ತ ನಿರ್ಧಾರ ಕೈಗೊಳ್ಳುತ್ತೇವೆ.
– ಜಯೇಶ್ ಜಾರ್ಜ್ ಕೇರಳ ಕ್ರಿಕೆಟ್ ಸಂಸ್ಥೆಯ ಕಾರ್ಯದರ್ಶಿ

LEAVE A REPLY

Please enter your comment!
Please enter your name here