“ಡೊಕ್ಲಾಮ್ ನಲ್ಲಿ ಭಾರತೀಯ ಸೈನಿಕರ ಸ್ಥಿತಿ ಬದಲಿಸಲು ಯಾರಿಂದಲೂ ಸಾಧ್ಯವಿಲ್ಲ”: ಭಾರತಕ್ಕೆ ಜಪಾನ್ ಬೆಂಬಲ

0
98
ಟೋಕಿಯೋ: ಡೋಕ್ಲಾಮ್ ವಲಯ ಹಾಗೂ ಲಡಾಖ್ ಪ್ರದೇಶದಲ್ಲಿ ಕ್ಯಾತೆ ತೆಗೆದು ಈಗಾಗಲೇ ತೀವ್ರ ಮುಖಭಂಗಕ್ಕೆ ಒಳಗಾಗಿರುವ ಚೀನಾಗೆ ಇದೀಗ ಮತ್ತೊಮ್ಮೆ ಮುಜುಗರಕ್ಕೀಡಾಗುವ ಪರಿಸ್ಥಿತಿ ಎದುರಾಗಿದ್ದು, ವಿವಾದಿತ ಪ್ರದೇಶದಲ್ಲಿ ದುರ್ವರ್ತನೆ ತೋರುತ್ತಿರುವ ಚೀನಾ ವಿರುದ್ಧ ಜಪಾನ್ ಕಿಡಿಕಾರಿದ್ದು, ಭಾರತಕ್ಕೆ ಬೆಂಬಲ ವ್ಯಕ್ತಪಡಿಸಿದೆ. ಡೋಕ್ಲಾಮ್ ವಿವಾದ ಸಂಬಂಧ ಪ್ರತಿಕ್ರಿಯೆ ನೀಡಿರುವ ಜಪಾನ್ ರಾಷ್ಟ್ರದ ರಾಯಭಾರಿ ಕೆಂಜಿ ಹಿರಮಟ್ಸು ಅವರು, ಡೋಕ್ಲಾಮ್ ಗಡಿ ವಿವಾದ ಸಂಬಂಧ ಭಾರತ ಹಾಗೂ ಚೀನಾ ಗಡಿಯಲ್ಲಿ ಕಳೆದೆರಡು ತಿಂಗಳುಗಳಿಂದ ಪ್ರಕ್ಷುಬ್ಧ ವಾತಾವರಣ ನಿರ್ಮಾಣವಾಗಿದೆ.
ಡೋಕ್ಲಾಮ್ ಗಡಿಯಲ್ಲಿ ಚೀನಾ ರಸ್ತೆ ನಿರ್ಮಾಣ ಮಾಡಿರುವುದಕ್ಕೆ ವಿರೋಧ ವ್ಯಕ್ತಪಡಿಸಿರುವ ಭಾರತ ಗಡಿಯಲ್ಲಿ ತನ್ನ ಸೇನೆಯನ್ನು ನಿಯೋಜನೆಗೊಳಿಸಿದೆ. ಗಡಿಯಲ್ಲಿ ಶಾಂತಿ ಸ್ಥಾಪನೆಗೆ ಸೇನೆ ನಿಯೋಜನೆ ಮುಖ್ಯವಾಗಿದೆ. ಡೋಕ್ಲಾಮ್ ಗಡಿಯಲ್ಲಿ ಭಾರತೀಯ ಸೇನೆ ಯಥಾಸ್ಥಿತಿಯನ್ನು ಬದಲಿಸಲು ಯಾರಿಂದಲೂ ಸಾಧ್ಯವಿಲ್ಲ ಎಂದು ಹೇಳಿದ್ದಾರೆ. ಡೋಕ್ಲಾಮ್ ವಿವಾದ ಸಂಬಂಧ ಭಾರತ ಹಾಗೂ ಚೀನಾ ನಡುವೆ ಉಂಟಾಗಿರುವ ಉದ್ವಿಗ್ನ ಪರಿಸ್ಥಿತಿಯನ್ನು ಜಪಾನ್ ಗಮನಿಸುತ್ತಲೇ ಇದೆ. ವಿವಾದ ಪ್ರಾದೇಶಿಕ ಸ್ಥಿರತೆಯ ಮೇಲೆ ಪ್ರಭಾವ ಬೀರುವ ಸಾಮರ್ಥ್ಯವನ್ನು ಹೊಂದಿದೆ. ಭಾರತದ ನಿಲುವಿಗೆ ಬರುವುದಾದರೆ. ಭೂತಾನ್ ಜೊತೆಗಿನ ದ್ವಿಪಕ್ಷೀಯ ಒಪ್ಪಂದದಿಂದಾಗಿ ಭಾರತ ವಿವಾದದಲ್ಲಿ ಭಾಗಿಯಾಗುತ್ತಿದೆ.
ಭಾರತದ ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್ ಅವರು ಕೂಡ ವಿವಾದ ಸಂಬಂಧ ಸ್ಪಷ್ಟವಾಗಿ ಹೇಳಿಕೆ ನೀಡಿದ್ದರು. ಡೋಕ್ಲಾಮ್ ವಿವಾದವನ್ನು ರಾಜತಾಂತ್ರಿಕ ಮಾರ್ಗದ ಮೂಲಕ ಬಗೆಹರಿಸುವುದಾಗಿ ಹೇಳಿದ್ದರು. ಈ ರೀತಿಯ ನಿಲುವು ಶಾಂತಿಯುತ ನಿರ್ಣಯಕ್ಕೆ ಮುಖ್ಯ ಎಂಬುದನ್ನು ಜಪಾನ್ ಪರಿಗಣಿಸುತ್ತದೆ ಎಂದು ತಿಳಿಸಿದ್ದಾರೆ. ಸಿಕ್ಕಿಂ ಗಡಿಯಲ್ಲಿ, ಭೂತಾನ್-ಭಾರತ ಮತ್ತು ಚೀನಾ ಟ್ರೈಜಂಕ್ಷನ್ ಪ್ರದೇಶದಲ್ಲಿರುವ ಡೋಕ್ಲಾಮ್ ನಲ್ಲಿ ಚೀನಾ ಕೈಗೊಂಡ ವಿವಾದಾತ್ಮಕ ರಸ್ತೆ ನಿರ್ಮಾಣ ಕಾರ್ಯವನ್ನು ಕಳೆದ ಮಾರ್ಚ್ 16 ರಂದು ಭಾರತೀಯ ಸೇನೆ ನಿಲ್ಲಿಸಿತ್ತು. ಪರಿಣಾಮವಾಗಿ ಉಭಯ ದೇಶಗಳ ನಡುವೆ ಸೇನಾ ಮುಖಾಮುಖೀ ಘರ್ಷಣೆ ಉಂಟಾಗಿ ಗಡಿಯಲ್ಲಿ ಪ್ರಕ್ಷುಬ್ಧ ವಾತಾವರಣ ನಿರ್ಮಾಣವಾಗಿದೆ. ವಿವಾದ ಸಂಬಂಧ ಭಾರತದ ಬೆಂಬಲಕ್ಕೆ ನಿಂತಿರುವ ವಿಶ್ವದ ದೊಡ್ಡಣ್ಣ ಅಮೆರಿಕ ನಿನ್ನೆಯಷ್ಟೇ ಹೇಳಿಕೆ ನೀಡಿತ್ತು. ಚೀನಾ ಮಾತುಕತೆ ಮೂಲಕ ಮಾತ್ರವೇ ಸಮಸ್ಯೆ ಬಗಹೆರಿಸಿಕೊಳ್ಳಬೇಕು ಎಂದು ಸಲಹೆ ನೀಡಿತ್ತು. ಅಮೆರಿಕ ಭಾರತ ಮತ್ತು ಚೀನಾ ಎರಡೂ ದೇಶಗಳೊಂದಿಗೂ ವಾಣಿಜ್ಯ ಮತ್ತು ಸೌಹಾರ್ಧ ಸಂಬಂಧ ಹೊಂದಿದೆ.
ಮುಖ್ಯವಾಗಿ ಚೀನಾ ಮಾತುಕತೆ ಮೂಲಕವೇ ಭಾರತದೊಂದಿಗಿನ ಸಮಸ್ಯೆ ಬಗೆಹರಿಸಿಕೊಳ್ಳಬೇಕು. ಇದರಿಂದ ಗಡಿಯಲ್ಲಿ ಶಾಂತಿ ಸ್ಥಾಪನೆಯಾಗಬೇಕು ಎಂದು ಹೇಳಿತ್ತು. ಈ ಹಿಂದಷ್ಟೇ ಚೀನಾ ತನ್ನ ಸೈನಿಕರನ್ನು ಹಿಂದಕ್ಕೆ ಕರೆಸಿಕೊಳ್ಳುವ ಕುರಿತು ನಕಾರ ವ್ಯಕ್ತಪಡಿಸಿತ್ತು. ತನ್ನ ಸೈನಿಕರನ್ನು ಹಿಂದಕ್ಕೆ ಕರೆಸಿಕೊಂಡು ಕುರಿತಾದ ಮಾಧ್ಯಮ ವರದಿಗಳನ್ನು ತಳ್ಳಿ ಹಾಕಿದ್ದ ಚೀನಾ, ಗಡಿ ವಿಚಾರದಲ್ಲಿ ಯಾವುದೇ ರೀತಿಯ ರಾಜಿ ಮಾಡಿಕೊಳ್ಳುವುದಿಲ್ಲ. ಮೊದಲು ಭಾರತ ತನ್ನ ಸೇನೆಯನ್ನು ಬೇಷರತ್ತಾಗಿ ಹಿಂದಕ್ಕೆ ಕರೆಸಿಕೊಳ್ಳದ ಹೊರತು ಚೀನಿ ಸೈನಿಕರು ಹಿಂದಡಿ ಇಡುವುದಿಲ್ಲ ಎಂದು ಚೀನಾ ಸ್ಪಷ್ಟ ಪಡಿಸಿತ್ತು.

LEAVE A REPLY

Please enter your comment!
Please enter your name here