ದೋನಿ ಬದ್ಧತೆ ಬಗ್ಗೆ ಪ್ರಸಾದ್ ಮೆಚ್ಚುಗೆ

0
3220

ಚೆನ್ನೈ: ‘ಮಹೇಂದ್ರ ಸಿಂಗ್ ದೋನಿ ಅವರು ಕ್ರಿಕೆಟ್ ಲೋಕ ಕಂಡ ದಿಗ್ಗಜ ಆಟಗಾರ. ಅವರ ಸಾಧನೆಯ ಹಾದಿ ಅಷ್ಟು ಸುಲಭದ್ದಲ್ಲ. ಬದ್ಧತೆ ಮತ್ತು ‍ಅರ್ಪಣಾ ಭಾವದಿಂದ ಅವರು ಚರಿತ್ರೆಯ ಪುಟಗಳಲ್ಲಿ ತಮ್ಮ ಹೆಸರನ್ನು ಸುವರ್ಣಾಕ್ಷರಗಳಲ್ಲಿ ಅಚ್ಚೊತ್ತಿದ್ದಾರೆ’…

ಹೀಗೆ ದೋನಿ ಅವರ ಬಗ್ಗೆ ಮೆಚ್ಚುಗೆಯ ಮಾತುಗಳನ್ನಾಡಿದವರು ಭಾರತ ಕ್ರಿಕೆಟ್ ನಿಯಂತ್ರಣ ಮಂಡಳಿಯ (ಬಿಸಿಸಿಐ) ಮುಖ್ಯಸ್ಥ ಎಂ.ಎಸ್.ಕೆ. ಪ್ರಸಾದ್.

‘ಹೋದ ವರ್ಷದ ಫೆಬ್ರುವರಿಯಲ್ಲಿ ಬಾಂಗ್ಲಾದೇಶದ ಢಾಕಾದಲ್ಲಿ ಏಷ್ಯಾಕಪ್ ಕ್ರಿಕೆಟ್ ಟೂರ್ನಿ ನಡೆದಿತ್ತು. ಪಾಕಿಸ್ತಾನ ಎದುರಿನ ಪಂದ್ಯಕ್ಕೂ ಎರಡು ದಿನ ಮುಂಚೆ ದೋನಿ ಗಂಭೀರವಾಗಿ ಗಾಯಗೊಂಡಿದ್ದರು. ಜಿಮ್ನಲ್ಲಿ ಕಸರತ್ತು ನಡೆಸುವ ವೇಳೆ ಭಾರ ಎತ್ತುವಾಗ ಸ್ನಾಯು ಸೆಳೆತದಿಂದ ಬಳಲಿದ್ದ ಮಹಿ, ಸ್ಥಳದಲ್ಲೇ ಕುಸಿದು ಬಿದ್ದಿದ್ದರು. ಆ ಸಮಯದಲ್ಲಿ ಅವರಿಗೆ ಎದ್ದು ನಡೆದಾಡಲೂ ಆಗುತ್ತಿರಲಿಲ್ಲ. ಹೀಗಾಗಿ ಸ್ಟ್ರೆಚರ್ನ ಸಹಾಯದಿಂದ ಅವರನ್ನು ಕೊಠಡಿಗೆ ಕರೆದುಕೊಂಡು ಹೋಗಿ ಚಿಕಿತ್ಸೆ ನೀಡಲಾಗಿತ್ತು. ವಿಷಯ ತಿಳಿದು ಕೊಠಡಿಗೆ ಹೋದೆ. ಆಗ ನನಗೆ ಏನೂ ಆಗಿಲ್ಲ. ಬೇಗ ಚೇತರಿಸಿಕೊಳ್ಳುತ್ತೇನೆ. ನೀವು ಆತಂಕಕ್ಕೊಳಗಾಗಬೇಡಿ ಎಂದು ಸ್ವತಃ ದೋನಿ ಅವರೇ ನನಗೆ ಧೈರ್ಯ ಹೇಳಿದ್ದರು’ ಎಂದು ‍ಪ್ರಸಾದ್ ಘಟನೆಯನ್ನು ನೆನಪಿಸಿಕೊಂಡಿದ್ದಾರೆ.

‘ದೋನಿ ಅವರಿಗೆ ಆಗಿದ್ದ ಗಾಯ ಗಂಭೀರ ಸ್ವರೂಪದ್ದಾಗಿದ್ದರಿಂದ ಪಾಕಿಸ್ತಾನದ ವಿರುದ್ಧ ಪಾರ್ಥೀವ್ ಪಟೇಲ್ ಅವರನ್ನು ಕಣಕ್ಕಿಳಿಸಲು ನಾವು ನಿರ್ಧರಿಸಿದ್ದೆವು. ಪಂದ್ಯದ ಹಿಂದಿನ ದಿನ ಮಧ್ನಾಹ್ನ ಆಡುವ ಬಳಗವನ್ನು ಆಯ್ಕೆ ಮಾಡಬೇಕಿತ್ತು. ಆಗ ದೋನಿ, ನನಗೆ ಕರೆ ಮಾಡಿ ಅವರ ಕೊಠಡಿಗೆ ಕರೆಸಿಕೊಂಡರು. ನೀವು ಏಕೆ ಇಷ್ಟು ಹೆದರುತ್ತಿದ್ದೀರಿ. ನಾನು ಈಗ ಸಂಪೂರ್ಣವಾಗಿ ಚೇತರಿಸಿಕೊಂಡಿದ್ದೇನೆ. ಪಾಕ್ ವಿರುದ್ಧ ಕಣಕ್ಕಿಳಿಯುತ್ತೇನೆ ಎಂದರು. ಅವರ ಬದ್ಧತೆ ಕಂಡು ನಾನು ಬೆರಗಾಗಿದ್ದೆ. ಮರು ದಿನ ಅವರು ಅಂಗಳಕ್ಕಿಳಿದು ತಂಡವನ್ನು ಗೆಲುವಿನೆಡೆಗೆ ಮುನ್ನಡೆಸಿದ್ದರು’ ಎಂದು ವಿವರಿಸಿದರು.

‘ತಪ್ಪುಗಳಿಂದ ಹೊಸ ಪಾಠ ಕಲಿಯುತ್ತಿರುವೆ’: ‘ತಪ್ಪುಗಳಿಂದ ಹೊಸ ಪಾಠಗಳನ್ನು ಕಲಿತು ಅವುಗಳನ್ನು ಮೈಗೂಡಿಸಿಕೊಳ್ಳಲು ಶ್ರಮಿಸುತ್ತಿದ್ದೇನೆ. ಹೀಗಾಗಿ ಸಿಕ್ಕ ಅವಕಾಶದಲ್ಲಿ ಶ್ರೇಷ್ಠ ಸಾಮರ್ಥ್ಯ ತೋರಿ ತಂಡದಲ್ಲಿ ಸ್ಥಾನ ಭದ್ರಮಾಡಿಕೊಳ್ಳಲು ಸಾಧ್ಯವಾಗುತ್ತಿದೆ’ಎಂದು ಭಾರತ ತಂಡದ ಮಧ್ಯಮ ವೇಗಿ ಜಸ್ಪ್ರೀತ್ ಬೂಮ್ರಾ ತಿಳಿಸಿದ್ದಾರೆ.

ಭಾನುವಾರ ನಡೆದಿದ್ದ ಶ್ರೀಲಂಕಾ ವಿರುದ್ಧದ ಮೂರನೇ ಏಕದಿನ ಪಂದ್ಯದಲ್ಲಿ 27 ರನ್ ನೀಡಿ 5 ವಿಕೆಟ್ ಉರುಳಿಸಿದ್ದ ಬೂಮ್ರಾ ಅವರು ಪಂದ್ಯ ಶ್ರೇಷ್ಠ ಗೌರವಕ್ಕೆ ಭಾಜನರಾಗಿದ್ದರು. ಇದು ಅವರ ವೃತ್ತಿಬದುಕಿನ ಶ್ರೇಷ್ಠ ಸಾಧನೆಯಾಗಿತ್ತು.

ಪಂದ್ಯದ ಬಳಿಕ ಮಾತನಾಡಿನ ಅವರು ‘ಕಲಿಕೆ ಎನ್ನುವುದು ನಿರಂತರ ಪ್ರಕ್ರಿಯೆ. ಪ್ರತಿ ಬಾರಿಯೂ ಹೊಸ ವಿಷಯ ಮತ್ತು ಕೌಶಲಗಳನ್ನು ಅರಿತುಕೊಳ್ಳುವುದರತ್ತ ಚಿತ್ತ ಹರಿಸಿದ್ದೇನೆ. ಇದರಿಂದ ಪ್ರದರ್ಶನ ಮಟ್ಟವೂ ಸುಧಾರಿಸುತ್ತದೆ ಎಂಬುದು ನನ್ನ ನಂಬಿಕೆ. ಶ್ರೀಲಂಕಾದಲ್ಲಿ ಮೊದಲ ಬಾರಿಗೆ ಆಡುತ್ತಿರುವುದರಿಂದ ಶುರುವಿನಲ್ಲಿ ಇಲ್ಲಿನ ಪರಿಸ್ಥಿತಿಗೆ ಹೊಂದಿಕೊಳ್ಳುವುದು ಕಷ್ಟವಾಗಿತ್ತು. ಹೀಗಾಗಿ ಮೊದಲ ಎರಡು ಪಂದ್ಯಗಳಲ್ಲಿ ಹೆಚ್ಚು ವಿಕೆಟ್ ಕೆಡವಲು ಆಗಿರಲಿಲ್ಲ’ ಎಂದರು.

‘ಎಲ್ಲರಿಗೂ ಎಲ್ಲಾ ವಿಷಯಗಳು ಗೊತ್ತಿರುವುದಿಲ್ಲ. ನಾನು ಈಗಿನ್ನೂ ಕ್ರಿಕೆಟ್ನ ಪಟ್ಟುಗಳನ್ನು ಕಲಿಯುತ್ತಿರುವವನು. ಹೀಗಾಗಿ ಏನೇ ಅನುಮಾನ ಬಂದರು ಅಭ್ಯಾಸದ ವೇಳೆ ಹಿರಿಯ ಆಟಗಾರರು ಅಥವಾ ತಂಡದ ಸಿಬ್ಬಂದಿಗಳ ಬಳಿ ಅದನ್ನು ಹೇಳಿ ಪರಿಹಾರ ಕಂಡುಕೊಳ್ಳುತ್ತೇನೆ. 2013ರಲ್ಲಿ ಐಪಿಎಲ್ನಲ್ಲಿ ಆಡುವ ಮುಂಬೈ ಇಂಡಿಯನ್ಸ್ ತಂಡದಲ್ಲಿದೆ. ಆಗ ನನಗೆ 19 ವರ್ಷ. ತಂಡದಲ್ಲಿ ಶ್ರೀಲಂಕಾದ ಲಸಿತ್ ಮಾಲಿಂಗ ಅವರೂ ಇದ್ದರು. ಅವರು ತಂಡದಲ್ಲಿರುವ ಯುವ ಬೌಲರ್ಗಳಿಗೆ ಅಗತ್ಯ ಮಾರ್ಗದರ್ಶನ ನೀಡಿ ಹೊಸ ಕೌಶಗಳನ್ನು ಹೇಳಿಕೊಡುತ್ತಿದ್ದರು. ನಾನೊಬ್ಬ ಪರಿಪೂರ್ಣ ಬೌಲರ್ ಆಗಿ ರೂಪುಗೊಳ್ಳುವಲ್ಲಿ ಅವರ ಸಲಹೆಗಳೂ ನೆರವಿಗೆ ಬಂದವು’ ಎಂದಿದ್ದಾರೆ.

‘ಪಂದ್ಯದಲ್ಲಿ ದಿಟ್ಟ ಆಟ ಆಡಿ ತಂಡಕ್ಕೆ ಗೆಲುವು ತಂದುಕೊಟ್ಟಾಗ ಅತೀವ ಖುಷಿಯಾಗುತ್ತದೆ. ನಾಯಕ ಎಂತಹುದೇ ಪರಿಸ್ಥಿತಿಯಲ್ಲಿ ಬೌಲಿಂಗ್ ಮಾಡಲು ಹೇಳಿದರೂ ನಿರ್ಭೀತಿಯಿಂದಲೇ ದಾಳಿ ನಡೆಸುತ್ತೇನೆ. ಮೊದಲು ಭಾರತ ತಂಡದ ಪರ ಕಣಕ್ಕಿಳಿದಾಗ ರವಿಶಾಸ್ತ್ರಿ ಅವರು ನಿರ್ದೇಶಕರಾಗಿದ್ದರು. ಒಂದು ದಿನ ನನ್ನನ್ನು ಕರೆದು ರಣಜಿ ಟ್ರೋಫಿಯಲ್ಲಿ ಚೆನ್ನಾಗಿ ಬೌಲ್ ಮಾಡು. ಆ ಟೂರ್ನಿಯನ್ನು ಕಲಿಕೆಯ ವೇದಿಕೆಯನ್ನಾಗಿ ಪರಿಗಣಿಸು ಎಂದು ಸಲಹೆ ನೀಡಿದ್ದರು. ಬೌಲಿಂಗ್ ಕೋಚ್ ಭರತ್ ಅರುಣ್ ಅವರೂ ಹಲವು ಸಂದರ್ಭಗಳಲ್ಲಿ ತಪ್ಪುಗಳನ್ನು ತಿದ್ದಿ ತಿಳಿ ಹೇಳಿದ್ದಾರೆ’ ಎಂದು ನುಡಿದಿದ್ದಾರೆ.

‘ಗೆಲುವಿನ ಸೂತ್ರವನ್ನೇ ಮರೆತಿದ್ದೇವೆ’: ‘ತಪ್ಪು ಎಲ್ಲರಿಂದಲೂ ಆಗುತ್ತದೆ. ಆದರೆ ಅದನ್ನು ತಿದ್ದಿಕೊಂಡು ಸಾಗಬೇಕು. ನಮ್ಮ ತಂಡದ ವಿಷಯದಲ್ಲಿ ಹಾಗಾಗುತ್ತಿಲ್ಲ. ನಾವು ಗೆಲುವಿನ ಸೂತ್ರವನ್ನೇ ಮರೆತಿರುವಂತೆ ಕಾಣುತ್ತಿದೆ. ಇನ್ನು ಮುಂದಾದರೂ ಎಚ್ಚೆತ್ತುಕೊಳ್ಳಲೇಬೇಕು. ನಾಲ್ಕನೇ ಪಂದ್ಯದಲ್ಲಿ ಗೆದ್ದು ಹಿಂದಿನ ನಿರಾಸೆ ಮರೆಯಬೇಕು. ಈ ನಿಟ್ಟಿನಲ್ಲಿ ಎಲ್ಲರೂ ಕಾರ್ಯಪ್ರವೃತ್ತರಾಗಬೇಕು’ ಎಂದು ಶ್ರೀಲಂಕಾ ತಂಡದ ಆಟಗಾರ ಚಾಮರ ಕಪುಗೆದೆರಾ ನುಡಿದಿದ್ದಾರೆ.

‘ಹಿಂದಿನ ಎರಡು ಪಂದ್ಯಗಳಲ್ಲಿ ಬೌಲರ್ಗಳಿಂದ ಶ್ರೇಷ್ಠ ಸಾಮರ್ಥ್ಯ ಮೂಡಿಬಂದಿದೆ. ಆದರೆ ಬ್ಯಾಟಿಂಗ್ನಲ್ಲಿ ವೈಫಲ್ಯ ಮುಂದುವರಿದಿದೆ. ಎಲ್ಲರೂ ಜವಾಬ್ದಾರಿ ಅರಿತು ಆಡಿದಾಗ ಮಾತ್ರ ತಂಡ ಯಶಸ್ಸಿನ ಹಾದಿಯಲ್ಲಿ ಸಾಗಲು ಸಾಧ್ಯ. ದೊಡ್ಡ ಮೊತ್ತ ಪೇರಿಸಿದರೇ ಖಂಡಿತವಾಗಿಯೂ ಗೆಲುವಿನ ಅವಕಾಶ ಹೆಚ್ಚಿರುತ್ತದೆ. ಆಗ ಬೌಲರ್ಗಳು ಆತ್ಮವಿಶ್ವಾಸದಿಂದ ದಾಳಿ ನಡೆಸಬಲ್ಲರು’ ಎಂದಿದ್ದಾರೆ.

‘ಮೊದಲ ಮೂರು ಪಂದ್ಯಗಳಲ್ಲಿ ಸೋತ ಮಾತ್ರಕ್ಕೆ ಆಟಗಾರರ ನಡುವೆ ಹೊಂದಾಣಿಕೆಯೇ ಇಲ್ಲ ಎಂದು ಬಿಂಬಿಸುವುದು ಸರಿಯಲ್ಲ. ನಮ್ಮಲ್ಲಿ ಗುಂಪುಗಾರಿಕೆ ಇಲ್ಲ. ಎಲ್ಲರ ನಡುವೆಯೂ ಉತ್ತಮ ಬಾಂಧವ್ಯ ಇದೆ. ಸರಣಿ ಸೋತಿರುವುದರಿಂದ ನಿರಾಸೆ ಆಗಿದೆ. ಹಾಗಂತ ಎಲ್ಲವೂ ಮುಗಿದು ಹೋಯಿತು ಎಂದು ಭಾವಿಸುವುದು ತಪ್ಪು. ಇನ್ನೂ ಎರಡು ಪಂದ್ಯಗಳು ಬಾಕಿ ಇವೆ. ಅವುಗಳಲ್ಲಿ ಗೆದ್ದು ಕಳೆದುಕೊಂಡಿರುವ ಆತ್ಮವಿಶ್ವಾಸವನ್ನು ಮರಳಿ ಪಡೆಯುತ್ತೇವೆ. ಈಗ ನಮ್ಮ ಮುಂದಿರುವ ಗುರಿ ಇದೊಂದೆ’ ಎಂದು ಕಪುಗೆದೆರಾ ಹೇಳಿದ್ದಾರೆ.

Source: DailyHunt

LEAVE A REPLY

Please enter your comment!
Please enter your name here